Pages

Subscribe:

Ads 468x60px

Thursday, February 26, 2009

ಬಂಧ ಮುಕ್ತೆ



ಮತ್ತೆ ನಿನಗೆ ನಾ ತೊಂದರೆ ಕೊಡುವುದಿಲ್ಲ,
ಜೀವಿಸಿಕೊ ನಿನ್ನ ಜೀವನ.
ಹಾರ ಬಯಸಿದ್ದೆಯಲ್ಲ ದಿವ್ಯ ದಿಗಂತದೆಡೆಗೆ,
ರೆಕ್ಕೆ ಬಿಚ್ಚಿ ಹಾರು, ಮತ್ತೆ ಪಂಜರದಲ್ಲಿ
ಬಂಧಿಸುವ ಕಾಯ೯ ನಾನೆಂದೂ ಮಾಡುವುದಿಲ್ಲ.

ನಿನಗಿನ್ನು ನನ್ನ ನೋಡಿ ಹೆದರುವ ಅಗತ್ಯವಿಲ್ಲ.
ನೀನು ಬಂಧ ಮುಕ್ತೆ. ನನ್ನ ಎದೆಗೂಡಿನಿಂದ,
ನನ್ನ ನೆನಪುಗಳಿಂದ, ನನ್ನ ಕನಸುಗಳಿಂದ.
ಆ ದಿನಮಣಿಯ ಕಿರಣ ನೀ ಹಾರುವ ದಿಕ್ಕ
ಬೇಳಗುತಿಹುದು, ಹೊರಡು ಬೇಗ.

ನಿನ್ನ ಜೀವನ ನಂದಾ ದೀಪವಾಗಲೆಂದೇ
ನನ್ನೆದೆಯ ಉಸಿರ ಸುರಿಯುತಿಹೆ
ಹಣತೆಯಲ್ಲಿ, ಬಸಿದುಕೊ ಸಾಧ್ಯವಾದಷ್ಟು.
ಆದಷ್ಟು ಬೇಗ ಬರಿದಾಗಿಸು.
ಆಗಲೇ ನಾ ನಿನ್ನ ನೆನಪುಗಳಿಂದ ಮುಕ್ತ.

ಇದುವರೆಗಿನೆಲ್ಲ ಕನಸುಗಳ ಹೂಮಾಲೆಯಾಗಿಸಿ
ನಿನ್ನ ಪಾದದಡಿಯಿಡುವೆ, ನಿನ್ನ ಹಾರುವ
ಕಾಲುಗಳಿಗದೇ ಚೈತನ್ಯವಂತೆ, ಒಮ್ಮೆ ತುಳಿದು
ಹಾಗೆಯೇ ನೆಗೆದುಬಿಡು ನಭ ನೀಲಿಯೆಡೆಗೆ.

ಮತ್ತೆ ನನ್ನ ಕಣ್ಣ ನೋಡಬೇಡ, ಕಳೆದುಕೊಂಡಿದ್ದೇನೆ
ಅವುಗಳಲ್ಲಿ ಅಶ್ರುಧಾರೆ ಹರಿದೀತೆಂದು.
ಮತ್ತೆ ಮಿಡುಕಬೇಡ, ಕೈ ಚಾಚಬೇಡ, ಮಣ್ಣಲ್ಲಿ
ಮಣ್ಣಾಗಿ ಹೋಗುವ ಮುನ್ನ ಹಾರಿಬಿಡು,
ಪ್ರಾಣ ಪಕ್ಷಿ ಹಾರಿ ಹೋದಂತೆ.

ಮತ್ತೆ ನಾ ನಿನಗೆ ತೊಂದರೆ ಕೊಡುವುದಿಲ್ಲ.

Thursday, February 19, 2009

ಮತ್ತೆ ನಿನ್ನೆಡೆಗೆ ತುಡಿಯುತ್ತಿದೆ ಮನ

ಇಷ್ಟು ದಿನ ನಿನ್ನ ಮೇಲಿನ ಅನುಕಂಪಕ್ಕೋಸ್ಕರ ನಿನ್ನ ಪ್ರೀತಿಯನ್ನ ಒಪ್ಪಿಕೊಂಡಿದ್ದೆ ಅನ್ನಿಸುತ್ತಿತ್ತು, ಆದರೆ ಮೊದಲ ಬಾರಿಗೆ ನನ್ನ ಎದೆಯಲ್ಲಿ ಮೋಡಗಟ್ಟಿ ಪ್ರೀತಿ ಮಳೆಹನಿಯಾಗಿ ಉದುರಿದ್ದು ಇಂದು. ನನ್ನಲ್ಲಿ ಉಂಟಾದ ಬದಲಾವಣೆಗೆ ನನಗೆ ಆಶ್ಚಯ೯ವಾಗುತ್ತಿದೆ. ಯಾವತ್ತೂ ಇಲ್ಲದ ದುಗುಡ, ಆತಂಕ, ವಿವ್ಹಲತೆ ಇವೆಲ್ಲಾ ಶುರು ಆದದ್ದು ಆ ಒಂದು ಮಾತಿನಿಂದ. ನನ್ನ ಪ್ರೀತಿಸಿದವಳ, ನನ್ನ ಆರಾಧಿಸಿದವಳ, ನನಗೋಸ್ಕರ ತಪಸ್ಸನ್ನೆ ಆಚರಿಸಿದವಳ ಮದುವೆಯಂತೆ ಎಂಬ ಸುದ್ದಿಯನ್ನು ಕೇಳಿದಾಗ ನನ್ನೆದೆ ಡವಗುಟ್ಟತೊಡಗಿತು. ಮುಖದಲ್ಲಿ ದುಗುಡ ತುಂಬಿದ ಭಯ, ನಿಂತ ಜಾಗದಲ್ಲಿಯೆ ಧರೆಯಲ್ಲಿ ಕುಸಿಯುತ್ತಿದ್ದೆನೇನೋ ಎಂಬ ಭ್ರಮೆ. ನನಗೆ ವಿಸ್ಮಯ; ಆ ಒಂದು ಮಾತಿನಿಂದ ನನ್ನಲ್ಲಿ ಈ ರೀತಿಯ ಬದಲಾವಣೆಗಳು ಏಕಾದವು ಎಂದು. ನನ್ನಲ್ಲಿಯೇ ಹಲವಾರು ಬಾರಿ ಪ್ರಶ್ನಿಸಿಕೊಂಡೆ, ಆಗಲೇ ಅನ್ನಿಸಿದ್ದು ಇದೇನಾ ಪ್ರೀತಿ ಎಂದು.

ನಿನ್ನ ಜಿದ್ದಿಗೆ ಬಾಗಿ ನಿನ್ನನ್ನ ನನ್ನ ಪ್ರೇಯಸಿ, ನೀನೆ ನನ್ನ ಜೀವನದ ಸಂಗಾತಿ ಎಂದು ಒಪ್ಪಿಕೊಂಡಿದ್ದೆ. ಆದರೆ ಆ ಸಂಬಂಧದಲ್ಲಿ ಪ್ರೀತಿ ಕೇವಲ ಒಪ್ಪಂದವಾಗಿತ್ತಷ್ಟೆ. ಒಪ್ಪಂದದ ಅಡಿಪಾಯದ ಮೇಲೆ ಕಟ್ಟಿದ ಸೌಧ ಎಷ್ಟು ದಿನ ತಾನೇ ಉಳಿದೀತು? ನೊಡ ನೋಡುತ್ತಿದ್ದಂತೆಯೇ ಉರುಳಿ ಬಿದ್ದಿತ್ತು. ಆಶ್ಚಯ೯ವೆಂದರೆ ಇಷ್ಟೊಂದು ಗಾಢವಾಗಿ ಪ್ರೀತಿಸಿದವಳ ಎದೆಯಲ್ಲಿ ದ್ವೇಷದ ಕಿಡಿ ಮೂಡಿದ್ದಾದರೂ ಹೇಗೆ ಎಂಬುದು. ಇಬ್ಬರೂ ಬೇರೆಯಾದೆವು. ಬೇರೆಯಾದುದನ್ನು ಸಮಥಿ೯ಸಿಕೊಳ್ಳುವುದಕ್ಕೆ ಇಬ್ಬರಲ್ಲಿಯೂ ಯಾವುದೇ ಕಾರಣಗಳಿರಲಿಲ್ಲ. ಅದು ನಿಮಿತ್ತ ಮಾತ್ರ. ಇದ್ದರೇ ಅದರಲ್ಲಿ ಇಬ್ಬರದೂ ತಪ್ಪಿದೆ. ಅನುಮಾನದ ಸುಳಿ ನಮ್ಮಿಬ್ಬರನ್ನೂ ನುಂಗಿಹಾಕಿತ್ತು. ಕಾರಣಗಳನ್ನ ಹುಡುಕಿ ಅದನ್ನ ಪರಿಹರಿಸುವ ವ್ಯವಧಾನ ಇಬ್ಬರಲ್ಲಿಯೂ ಇರಲಿಲ್ಲ. ಕಾರಣ, ಇಬ್ಬರ ಮನಸ್ಸಿನಲ್ಲಿಯೂ ಎಲ್ಲೋ ಒಂದು ಕಡೆ ಈ ಸಂಬಂಧ ಮುರಿದು ಹೋಗಲಿ ಎಂಬ ಭಾವನೆ ಮೂಡಿದಂತಿತ್ತು. ಅದಕ್ಕೇನೆ ಬೇರೆ ಬೇರೆಯಾದರೂ ಅದನ್ನ ಮತ್ತೆ ಕೆದಕಿ ತೆಗೆದು ನೋಡುವ ಗೋಜಿಗೆ ಹೋಗಲಿಲ್ಲ. ಈ ಕಥೆ ಇಲ್ಲಿಗೇ ಮುಗಿದು ಬಿಡಲಿ ಎಂಬ ನಿಧಾ೯ರ ತೆಗೆದುಕೊಂಡವರಂತೆ ನಡೆದುಬಿಟ್ಟೆವು.

ಹೀಗೆ ಸಂಬಂಧ (ಒಪ್ಪಂದ) ಮುರಿದು ಬಿದ್ದಿದ್ದಕ್ಕೆ ನನಗೆ ಯವುದೇ ರೀತಿಯ ದು:ಖ ಅಥವಾ ನೋವು ಆಗಿರಲಿಲ್ಲ. ಆದರೆ ಇಂದು ನಿನ್ನ ಮದುವೆಯ ಮಾತು ಕಿವಿಗೆ ಬೇಳುತ್ತಿದ್ದಂತೆ ನಾನು ಅಧಿರನಾದದ್ದು ಏಕೆ? ಬಹುಷಹ ನಿನ್ನ ಮೇಲೆ ಪ್ರೀತಿ ಇಲ್ಲ ಎಂದು ಸಾರಿ ಹೇಳುವಾಗ ನನ್ನಂತರಂಗದಲ್ಲ್ಎಲ್ಲೋ ಒಂದು ಕಡೆ ನಿನ್ನೆಡೆ ಪ್ರೀತಿಯ ಚಿಗುರು ಮೂಡುತ್ತಿದ್ದಿರಬೇಕು. ನಾನು ಬೇಡವೆಂದರೂ ನನ್ನೊಳ ಮನಸ್ಸು ಕಿಟಕಿಯ ಬಾಗಿಲನ್ನು ತೆರೆದು ತನ್ನ ಇರುವಿಕೆಯನ್ನ ತೋರಿಸಲು ಪ್ರಯತ್ನಿಸುತ್ತಿರಬೇಕು. ಇದೇನಾ ಪ್ರೀತಿ? ಹೌದು ಇದೇ ಪ್ರೀತಿ. ಮತ್ತೆ ನಿನ್ನೆಡೆಗೆ ನನ್ನ ಮನ ತುಡಿಯುತ್ತಿದೆ. ಆದರೇನಂತೆ ಎಲ್ಲಕ್ಕೂ ಪೂಣ೯ವಿರಾಮವಿಟ್ಟಂತಿರುವ ನಿನ್ನ ನಿಧಾ೯ರ ನನ್ನನ್ನು ತಡೆದು ನಿಲ್ಲಿಸಿದೆ. ನಾಳೆಯ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ಇವತ್ತಿನದಂತೂ ಸತ್ಯ. ನಾನು ನಿನ್ನನ್ನ ಪ್ರೀತಿಸುತ್ತಿದ್ದೇನೆ. ಅಂದು ನಿನ್ನ ಪ್ರೀತಿಯ ಚಿಗುರಿಗೆ ನಾನು ಅನುಕಂಪದ ನೀರೆರೆದಂತೆ ಇಂದು ಮೂಡುತ್ತಿರುವ ನನ್ನ ಪ್ರೀತಿಯ ಆಸೆಗೆ ಅನುಕಂಪದಿಂದಲಾದರೂ ಸರಿಯೆ ಬೊಗಸೆಯಲೊಂದಿಷ್ಟು ನೀರುಣಿಸುವೆಯಾ? ಬದುಕಿಕೊಳ್ಳುವುದೀ ಬಡಜೀವ.