Pages

Subscribe:

Ads 468x60px

Friday, January 9, 2009

ಕಣ್ಣ ಹನಿಯ ಕರೆದು ಕೇಳು

ನೊಂದ ಮನವು ನುಡಿವ ಸಾಲು,
ತೊರೆದ ಗೆಳತಿಯ ಪ್ರೀತಿ ಪಾಲು.
ಕಣ್ಣ ಹನಿಯ ಕರೆದು ಕೇಳು,
ಎದೆಯೊಳೆಷ್ಟು ತೀರದ ನೋವು.


ನೇನಪು ಸರಿದು, ಮತ್ತೆ ಬರಲು
ಬಿಕ್ಕುತಿಹುದು ಒಂಟಿ ಮನಸು.
ಕಡಲ ತಡಿಯ ಹೆಜ್ಜೆ ಗುರುತು,
ತಿರುಗಿ ನೋಡೆ ಇಲ್ಲ ಕುರುಹು.


ಮಾತು, ಮಾತು ಬೆರೆತ ಹೊತ್ತು
ಈಗ ಮೌನವೇ ನಿತ್ಯ ತುತ್ತು.
ರಾಗ, ಭಾವದ ಕಾವ್ಯ ಸಂಜೆಗೆ
ರಕ್ತ ಚೆಲ್ಲಿದ ಅಸ್ಥ ದಿಕ್ಕು.


ನಿನಗೆ ತರವೆ, ಓ ಒಲವೆ,
ಪ್ರೇಮದುಸಿರ ಕಡಿವ ಬಯಕೆ
ಬದುಕ ಬಯಸಿ "ಅಂಜಲಿ" ಪಿಡಿವೆ,
ಜನಿತ ತಮವನೊರೆಸಿ ಪೊರೆಯೆ.

ನಿನ್ನ ಪ್ರೀತಿಗೆ !

"ನಿನ್ನ ಮದುವೆ ಆಗೋ ಹೆಣ್ಣು ತುಂಬಾ ಪುಣ್ಯ ಮಾಡಿರಬೇಕು ಕಣೋ; ಆದರೆ ಆ ಪುಣ್ಯ ನನಗಿಲ್ದೇ ಹೋಯ್ತಲ್ಲ", ಎಂದು ಕಣ್ತುಂಬಿಕೊಂಡು ಆಡಿದ ಮಾತುಗಳು ಇಂದಿಗೂ ನನ್ನ ಎದೆಯಲ್ಲಿ ಅಚ್ಚಾಗಿ ಉಳಿದಿದೆ. "ಯಾಕೆ ನನ್ನ ಅಷ್ಟೊಂದು ಹಚ್ಚಿಕೊಂಡೆ ಹುಡುಗಿ?". ಅಂದು ಜ್ಯೂನಿಯರ್ ವೆಲ್ ಕಮ್ ಪಾಟಿ೯ಯಲ್ಲಿ ನಿಮ್ಮನ್ನ ಸ್ವಾಗತ ಮಾಡುವಾಗ ನಾನು ನಿನಗೆ ನೀಡಿದ ಒಂದೇ ಒಂದು ಗುಲಾಬಿ ಹೂವು, ನನ್ನ ಸಹಾಯಕ್ಕೆ ಬಂದಾಗಲೆಲ್ಲ ಕೇವಲ ತಮಾಷೆಗಾಗಿ "ನನ್ನ ಮೇಲೆ ಅಷ್ಟೊಂದು ಪ್ರೀತಿಯೇನೆ ಹುಡುಗಿ", ಅಂದ ನನ್ನ ಮಾತುಗಳೇ ನೀನು ನನ್ನ ಪ್ರೀತಿಸುವುದಕ್ಕೆ ಮಣೆ ಹಾಕಬಹುದು ಎಂದು ನಾನು ಕನಸಿನಲ್ಲೂ ಎಣಿಸಿರಲಿಲ್ಲ. ನನ್ನ ಕೈ ನಿಮ್ಮೆಡೆಗೆ ಚಾಚಿದ್ದು ಒಂದು ಮಧುರ ಸ್ನೇಹಕ್ಕಾಗಿ, ಆದರೆ ಅದನ್ನ ಪ್ರೀತಿಗಾಗಿ ಅಂದುಕೊಂಡೆಯಲ್ಲೇ ಹುಡುಗಿ. ನಿನ್ನ ಪ್ರೀತಿಗೆ ಅಹ೯ನಾದ ವ್ಯಕ್ತಿ ನಾನಲ್ಲ ಕಣೆ ಎಂದು ಕೂಗಿ ಹೇಳುವಷ್ಟರಲ್ಲಿಯೇ ನಿನ್ನ ಮೈ ಮನಸ್ಸುಗಳಲ್ಲಿ ನನ್ನನ್ನು ತುಂಬಿಕೊಂಡಿದ್ದೆ. "ಇಲ್ಲ" ಎನ್ನುವ ಪದ ನಿನ್ನ ಕಿವಿಗೆ ಬೀಳದಂತೆ ಆ ದೇವರಲ್ಲಿ ಪ್ರಾಥಿ೯ಸಿಕೊಳ್ಳುತ್ತಿದ್ದೆ. ನನ್ನ ನೆರಳಾಗಿ ನನ್ನ ಸಾಮೀಪ್ಯಕ್ಕಾಗಿ ಹಾತೊರೆಯುತ್ತಿದ್ದೆ. ನನ್ನ ಒಂದು ಮಾತಿಗಾಗಿ ಎಷ್ಟೋ ವಷ೯ದಿಂದ ಮಳೆಹನಿಯನ್ನೇ ಕಾಣದ ಬಿಸಿ ಭೂಮಿಯ ಹಾಗೆ ಕಾದು ಕುಳಿತಿದ್ದೆ. ಆದರೆ ಹುಡುಗಿ ನಿನ್ನನ್ನ ಒಬ್ಬ ಆತ್ಮೀಯ ಗೆಳತಿಯನ್ನಾಗಿ ಸ್ವೀಕರಿಸಿದ್ದೆನೆ ಹೊರತು ಬೇರೆ ಯಾವುದೇ ರೀತಿಯ ಅನುರಾಗ ಇರಲಿಲ್ಲ. ಇದನ್ನ ನಿನಗೆ ಹೇಳುವುದಾದರೂ ಹೇಗೆ ? ಅಷ್ಟೊಂದು ಪ್ರೀತಿಯನ್ನ ತುಂಬಿಕೊಂಡಿರುವ ನೀನು ಎಲ್ಲಿ ಸಿಡಿದು ಹೋಗುವೆಯೋ ಅನ್ನೊ ಭಯ. ಆದರೆ ಹೇಳದೇ ವಿಧಿಯಿರಲಿಲ್ಲ, ಅದಕ್ಕೆ ಸೂಕ್ಷ್ಮವಾಗಿ " ನಾನು ನಿನ್ನನ್ನ ಒಬ್ಬ ಆತ್ಮೀಯ ಗೆಳತಿಯನ್ನಾಗಿ ಸ್ವೀಕರಿಸಬಲ್ಲೆನೆ ಹೊರತಾಗಿ ಪ್ರೇಮಿಯನ್ನಾಗಿ ಅಲ್ಲ" ಎಂದು ಚಿಕ್ಕದಾಗಿ ಬರೆದು ನಿನ್ನ ಅಂಗೈಯ್ಯಲ್ಲಿಟ್ಟು ಎದುರು ಮೂಕನಾಗಿ ನಿಂತೆ. ಅದನ್ನು ಓದಿದ ನೀನು ನೀನಾಗಿರಲಿಲ್ಲ, ಒಮ್ಮೆಲೇ ಧರೆಗೆ ಕುಸಿದು ಹೋದೆ. ಅಷ್ಟೇ, ನಿನ್ನ ಕಣ್ಣಿನಿಂದ ತೊಟ್ಟಿಕ್ಕುತ್ತಿದ್ದ ಹನಿಗಳೇ ಸಾರುತ್ತಿದ್ದವು ನನ್ನ ಮೇಲಿನ ಪ್ರೀತಿಯನ್ನ. ಆಗ ಅದುರುತ್ತಿದ್ದ ನಿನ್ನ ತುಟಿಯಿಂದ ಬಂದ ಮಾತು ಇಷ್ಟೇ, "ನಿನ್ನ ಮದುವೆ ಆಗೋ ಹೆಣ್ಣು ತುಂಬಾ ಪುಣ್ಯ ಮಾಡಿರಬೇಕು ಕಣೋ; ಆದರೆ ಆ ಪುಣ್ಯ ನನಗಿಲ್ದೇ ಹೋಯ್ತಲ್ಲ". ಆಂದು ನಿನ್ನನ್ನು ಸಮಾಧಾನಿಸಲು ನನ್ನಲ್ಲಿ ಮಾತುಗಳಿರಲಿಲ್ಲ, ಮಂಕಾಗಿ ನಿಂತು ನಿನ್ನ ಕಣ್ಣಿನಿಂದ ತೊಟ್ಟಿಕ್ಕುತ್ತಿದ್ದ ಹನಿಗಳಲ್ಲಿ ನನ್ನ ಮೆಲಿನ ಪ್ರೀತಿಯನ್ನ ನೋಡುತ್ತಿದ್ದೆ. ಮುಂಜಾನೆಯ ಮಂಜು ಎಲೆಯ ಮೇಲೆ ಬಿದ್ದು ಜಾರಿ ಹೋಗುವ ಹಾಗೆ ನನ್ನ ಬದುಕಿಂದ ಜಾರಿ ಹೋದೆ. ಇಂದು ನಿನ್ನ ನೆನಪಾದಾಗಲೆಲ್ಲ ನನ್ನ ಕಣ್ಣ ಮುಂದೆ ಸುಳಿಯುವ ಕವಿಯ ಸಾಲು, "ನಿನ್ನ ಪ್ರೀತಿಗೆ ಅದರ ರೀತಿಗೆ ನೀಡಬಲ್ಲೆನೆ ಕಾಣಿಕೆ...".
ನನ್ನ ಕ್ಷಮಿಸು ಗೆಳತಿ