Pages

Subscribe:

Ads 468x60px

Sunday, May 31, 2009

ಮಹಾಭಾರತ ವಂಶಾವಳಿ

ಮಹಾಭಾರತದಲ್ಲಿ ಬರುವ ವಿವಿಧ ಪಾತ್ರಗಳು ಮತ್ತು ಅವುಗಳ ನಡುವಿನ ಸಂಬಂಧಗಳ ಕುರಿತು ಚಿಕ್ಕ ವಿವರಣೆ.


ಅತ್ರಿ ಮುನಿಯಿಂದ ಮಹಾಭಾರತದ ವಂಶಾವಳಿ ಆರಂಭವಾಗುವುದು. ಈ ಮುನಿಯ ವಂಶ ಬೀಜವಾಗಿ ಚಂದ್ರನ ಜನನವಾಗುತ್ತದೆ. ಈತನಿಂದಲೇ ಚಂದ್ರ ವಂಶದ ಆರಂಭವಾಯಿತು. ಚಂದ್ರನಿಗೆ ಬುಧನೆಂಬ ಮಗನು ಜನಿಸಿದನು. ಬುಧ ಮತ್ತು ಆತನ ಹೆಂಡತಿ ಭೂದೇವಿಯಿಂದ ಪುರೂರವನು ಜನಿಸಿದನು. ಪುರೂರವನ ಹೆಂಡತಿ ಊವ೯ಶಿ, ಇವರಿಬ್ಬರ ಸಂತತಿಯೇ ಆಯ:ಕುಮಾರಕ. ಮುಂದೆ ಈ ಆಯ:ಕುಮಾರಕನಿಗೆ ನಹುಷನೆಂಬ ಮಗನೂ, ನಹುಷನಿಗೆ ಯಯಾತಿಯೂ ಜನಿಸಿದರು.

ಕಾಲಾನಂತರದಲ್ಲಿ ಚಂದ್ರವಂಶವು ಇಬ್ಭಾಗವಾಗುತ್ತದೆ. ಯದುವಿನಿಂದ "ಯಾದವ ವಂಶ" ಹಾಗೂ ಯಯಾತಿಯಿಂದ "ಕೌರವ ವಂಶ" ಉದಯವಾಯಿತು. ಮುಂದೆ ಈ ವಂಶದಲ್ಲಿ ಜನಿಸಿದ ದುಷ್ಯಂತನಿಂದ ಭರತನ ಜನನವಾಯಿತು. ಈ ದೇಶಕ್ಕೆ ಭರತನಿಂದಲೇ ಭಾರತ ಎಂಬ ಹೆಸರು ನಾಮಕರಣವಾಯಿತು. ಮುಂದೆ ಭರತನಿಗೆ ಸುಹೋತ್ರ, ಸುಹೋತ್ರನಿಗೆ ಹಸ್ತಿಯು ಜನಿಸಿದರು. ಹಸ್ತಿಯಿಂದಲೇ "ಹಸ್ತಿನಾಪುರದ" ಉಗಮವಾಯಿತು. ಕಾಲಾನಂತರದಲ್ಲಿ, ಇದೇ ಸಂತತಿಯಲ್ಲಿ ಸಂವರಣನೂ, ಸಂವರಣನಿಂದ ಕುರುಮಹೀಪತಿಯೂ ಜನಿಸಿದರು. ಕುರುಮಹೀಪತಿಯಿಂದಾಗಿ ಕೌರವ ವಂಶದ ಆರಂಭವಾಯಿತು. ಹೀಗೇ ಮುಂದುವರಿಯಲು, ಈ ಪರಂಪರೆಯಲ್ಲಿ ಪ್ರತೀಪ ರಾಜನೂ ಆತನಿಂದ ಶಂತನುವೂ ಜನಿಸಿದರು.

ಶಂತನುವು ಬೆಳೆದು ರಾಜನಾದಂತೆ; ನದಿಬಯಲಿಗೆ ವಿಹಾರಕ್ಕೆಂದು ಹೋದಾಗ ಗಂಗೆಯನ್ನು ಕಂಡು ಮೋಹಗೊಳ್ಳುತ್ತಾನೆ. ಆಕೆಯನ್ನು ವಿವಾಹವಾಗ ಬಯಸಲು ಆಕೆಯು "ನಾನು ಯಾರೆಂದು ಕೇಳಕೂಡದು, ನಾನು ಮಾಡುವ ಕೆಲಸಗಳಿಗೆ ಅಡ್ಡಿಪಡಿಸಬಾರದು" ಎಂದು ಶರತ್ತನ್ನು ವಿಧಿಸುತ್ತಾಳೆ. ಶಂತನುವಿನ ಎದೆಯಲ್ಲಿ ಪ್ರೇಮಾಂಕುರಿಸಿದ್ದರಿಂದ, ಈ ಶರತ್ತುಗಳಿಗೆ ಒಪ್ಪಿ ಗಂಗೆಯನ್ನು ವರಿಸುತ್ತಾನೆ. ಇವರಿಬ್ಬರಿಗೆ ಎಂಟು ಜನ ಮಕ್ಕಳು, ಎಂಟನೆಯ ಮಗುವೇ ಭೀಷ್ಮ. ಈ ಎಂಟೂ ಜನ ಮಕ್ಕಳೂ ಹಿಂದೆ ಅಷ್ಟವಸುಗಳಾಗಿದ್ದವರು. ವಶಿಷ್ಟರ ಕಾಮಧೇನುವನ್ನು ಹಿಂಸಿಸಿದ್ದರಿಂದ ಶಾಪಗ್ರಸ್ತರಾಗಿ ಏಳು ಜನ ವಸುಗಳು ಗಂಗೆಯುದರದಲ್ಲಿ ಜನಿಸಿ ನದಿಗೆ ಎಸೆಯಲ್ಪಡುತ್ತಾರೆ. ಎಂಟನೆಯ ವಸು ಅಂದರೆ ಭೀಷ್ಮ ಹೆಂಡತಿಯ ಮಾತನ್ನು ಕೇಳಿ ಕಾಮಧೇನುವನ್ನು ಪೀಡಿಸಿದ್ದರಿಂದ ಶಾಪಗೊಂಡು, ಹೆಂಡತಿಯ ಸುಖವನ್ನು ಪಡೆಯದೇ ಮುಂದೆ ಶಿಖಂಡಿಯಿಂದ ಹತನಾಗುತ್ತಾನೆ. ಭೀಷ್ಮನ ಜನನವಾದಕೂಡಲೆ ಗಂಗೆಯು ಆ ಮಗುವನ್ನೂ ನೀರಿಗೆಸೆಯಲು ಉದ್ಯುಕ್ತಳಾದಾಗ ಶಂತನುವಿನಿಂದ ಪ್ರಶ್ನಿಸಲ್ಪಟ್ಟು, ಶರತ್ತು ಮುರಿದುಬಿದ್ದ ಕಾರಣ ಮಗುವನ್ನು ಗಂಡನ ಕೈಗಿತ್ತು ಮೂಲ ಗೃಹವನ್ನು ಸೇರುತ್ತಾಳೆ.

ಉಪರಿಚರ ವಸುಗಳು ಹಿಂದೊಮ್ಮೆ ನದಿಯ ಮಾಗ೯ವಾಗಿ ಚಲಿಸುವಾಗ, ರೇತಸ್ಖಲನವಾಗಿ ಅದನ್ನು ಮತ್ಸ್ಯವೊಂದು ನುಂಗಲು ಆ ಮತ್ಸ್ಯಗಂಧಿಯಲ್ಲಿ ಸತ್ಯವತಿಯ ಜನನವಾಗುತ್ತದೆ. ಇದೇ ಉಪರಿಚರ ವಸುಗಳ ರೇತಸ್ಖಲನದಿಂದ ಮುಂದೆ ವಿರಾಟ ರಾಜನ ಜನನವಾಗುತ್ತದೆ. ಪರಾಶರ ಮುನಿಯು ಸತ್ಯವತಿಯಲ್ಲಿ ಮೋಹಗೊಂಡು ಕೂಡಲು ವೇದವ್ಯಾಸರ ಜನಿಸುತ್ತಾರೆ. ಆದರೆ ಪರಾಶರ ಮುನಿಯು ಸತ್ಯವತಿಗೆ ಪುನ:ಕನ್ಯತ್ವವನ್ನು ಕರುಣಿಸಲು ಮುಂದೆ ಆಕೆ ಶಂತನುವನ್ನು ವಿವಾಹವಾಗುತ್ತಾಳೆ. ಚಿತ್ರಾಂಗಧ ಮತ್ತು ವಿಚಿತ್ರವೀಯ೯, ಶಂತನು ಮತ್ತು ಸತ್ಯವತಿಯ ಮಕ್ಕಳು. ಶಂತನುವಿನ ಮರಣದ ನಂತರ ಆಪತ್ಕಾಲದಲ್ಲಿ ಚಿತ್ರಾಂಗಧನೂ ಮಡಿಯಲು ವಿಚಿತ್ರವೀರ್ಯನು ಪಟ್ಟಾಭಿಷಿಕ್ತನಾಗುತ್ತಾನೆ. ಭೀಷ್ಮನು ಇವರನ್ನೆಲ್ಲಾ ಸಲಹುತ್ತಿರಲು, ಕಾಶಿರಾಜನ ಮಕ್ಕಳಾದ ಅಂಬಿಕೆ ಮತ್ತು ಅಂಬಾಲಿಕೆಯರನ್ನು ತಂದು ವಿಚಿತ್ರವೀಯ೯ನಿಗೆ ವಿವಾಹ ಮಾಡಿಸುತ್ತಾನೆ. ಆದರೆ ಇನ್ನೊಬ್ಬ ಮಗಳಾದ ಅಂಬೆಯು ಭೀಷ್ಮನೇ ತನಗೆ ವರನಾಗಬೇಕೆಂದು ಹಟ ಹಿಡಿಯಲು ಭಿಷ್ಮನಿಂದ ತಿರಸ್ಕೃತಳಾಗಿ, ನೊಂದು ಮುಂದೆ ದ್ರುಪದನ ಉದರದಲ್ಲಿ ಶಿಖಂಡಿಯಾಗಿ ಜನಿಸಿ ಭೀಷ್ಮನ ಸಾವಿಗೆ ಕಾರ‍ಣಳಾಗುತ್ತಾಳೆ. ನಂತರದಲ್ಲಿ ವಿಚಿತ್ರವೀಯ೯ನೂ ಸುರಲೋಕವನ್ನು ಸೇರಲು, ಸಂತತಿ ಮುಂದುವರಿಯದೇ ಇರಲು, ವೇದವ್ಯಾಸರ ವರಪ್ರಸಾದದಿಂದಾಗಿ ಅಂಬಿಕೆಗೆ ದೃತರಾಷ್ಟ್ರನೂ(ಜಾತ್ಯಂಧ), ಅಂಬಾಲಿಕೆಗೆ ಪಾಂಡುವೂ ಮತ್ತು ಒಬ್ಬ ದಾಸಿಗೆ ವಿದುರನೂ ಜನಿಸಿದರು.

ಕುಂತಿಯು ಹಿಂದೆ ದೂವಾ೯ಸ ಮುನಿಯನ್ನು ಫಲ, ಪುಷ್ಪ, ಭೋಜನಾದಿಗಳಿಂದ ಸತ್ಕರಿಸಲು ಮುನಿಯು ಸಂತುಷ್ಟನಾಗಿ "ಇಷ್ಟ ದೇವನಿಂದ ಮಗನನ್ನು ಪಡೆ" ಎಂಬ ವರವನ್ನು ನೀಡುತ್ತಾನೆ. ಈ ಮಂತ್ರೋಕ್ತಿಯನ್ನು ಪರೀಕ್ಷಿಸಲೋಸುಗ ಕುಂತಿಯು ಸೂಯ೯ದೇವನನ್ನು ನೆನೆಯಲು, ಪ್ರತ್ಯಕ್ಷನಾಗಿ ತೇಜಪುಂಜನಾದ ಕಣ೯ (ರಾಧೇಯ) ನನ್ನು ದಯಪಾಲಿಸುತ್ತಾನೆ. ಆದರೆ ಭಯಭೀತಳಾದ ಕುಂತಿಯು ಆ ಮಗುವನ್ನು ಸಲಹಲೊಲ್ಲದೆ ನದಿಯಲ್ಲಿ ತೇಲಿಬಿಡುತ್ತಾಳೆ. ಆ ಮಗುವನ್ನು ಶೂದ್ರನೊಬ್ಬ ಸಲಹುತ್ತಾನೆ. ಮುಂದೆ ಕುಂತಿಯು ಪಾಂಡುವಿನ ಹೆಂಡತಿಯಾಗುತ್ತಾಳೆ. ದೃತರಾಷ್ಟ್ರನು ಹುಟ್ಟುಕುರುಡನಾದ್ದರಿಂದ ಪಾಂಡು ರಾಜ್ಯಭಾರವನ್ನು ನಡೆಸುತ್ತಾನೆ. ದೃತರ‍ಷ್ಟನು ಗಾಂಧಾರ ದೇಶದ ರಾಜಕುಮಾರಿ ಗಾಂಧಾರಿಯನ್ನು, ಪಾಂಡುರಾಜ ಕುಂತಿ ಮತ್ತು ಮಾದ್ರಿಯರನ್ನು ವಿವಾಹವಾಗುತ್ತಾರೆ. ಪಾಂಡು ರಾಜನು ವನ್ಯಮೃಗಗಳ ಬೇಟೆಗೆಂದು ಹೋದಾಗ ಮುನಿದಂಪತಿಗಳು ಮೃಗರೂಪಧಾರಿಗಳಾಗಿ ಸುಖಿಸುತ್ತಿರಲು ರಾಜನು ನಿಜ ಮೃಗವೆಂದೇ ಭಾವಿಸಿ ಬಾಣ ಪ್ರಯೋಗಿಸುತ್ತಾನೆ. ಸಾಯುವಾಗ ಮುನಿಯು ನಿಜರೂಪವನ್ನು ತಾಳಿ "ನೀನೂ ಕೂಡ ನಿನ್ನ ಹೆಂಡತಿಯರೋಡನೆ ಸುಖಿಸುವಾಗ ಮರಣಹೊಂದು" ಎಂದು ಶಾಪಗೈಯ್ಯುತ್ತಾನೆ. ಪಾಂಡುವಿಗೆ ಸಂತತಿ ಭಾಗ್ಯವಿಲ್ಲದಿರಲು ಚಿಂತಿತಳಾದ ಕುಂತಿಯು ಹಿಂದೆ ದೂವಾ೯ಸ ಮುನಿಯು ನೀಡಿದ ವರವನ್ನು ನೆನೆಯುತ್ತಾಳೆ. ಕುಂತಿಯು ವರಮಂತ್ರವನ್ನು ಜಪಿಸಿ ಯಮನಿಂದ ಧಮ೯ರಾಯನನ್ನು, ವಾಯುವಿನಿಂದ ಭೀಮನನ್ನು ಮತ್ತು ಇಂದ್ರನಿಂದ ಅಜು೯ನನನ್ನು ಮಕ್ಕಳಾಗಿ ಪಡೆಯುತ್ತಾಳೆ. ಇತ್ತ ಮಾದ್ರಿಯು ಮಕ್ಕಳಿಲ್ಲದೇ ಚಿಂತಿಸುತ್ತಿರಲು ಕುಂತಿಯು ತಾನು ವರವಾಗಿ ಪಡೆದ ಮಂತ್ರವನ್ನು ಆಕೆಗೂ ಉಪದೇಶಿಸುತ್ತಾಳೆ. ಈ ಆ ದಿವ್ಯ ಮಂತ್ರವನ್ನ ಜಪಿಸಿ ಮಾದ್ರಿಯು ಆಶ್ವಿನಿ ದೇವತೆಗಳಿಂದ ನಕುಲ ಮತ್ತು ಸಹದೇವ ಎಂಬ ಇಬ್ಬರು ಮಕ್ಕಳನ್ನು ಪಡೆಯುತ್ತಾಳೆ. ಇತ್ತ ದೃತರಾಷ್ಟ್ರ ಮತ್ತು ಗಾಂಧಾರಿಗೆ ದುಯೋ೯ಧನ, ದುಶ್ಯಾಸನ, ವಿಕಣ೯, ಸುಭಾಹು ಮತ್ತು ಮಗಳಾಗಿ ದುಶ್ಯಳೆಯೊಡಗೂಡಿ ನೂರು ಮಕ್ಕಳು ಜನಿಸುತ್ತಾರೆ. ದೃತರಾಷ್ಟ್ರನಿಗೆ ವೇಶ್ಯಾಂಗನೆಯಲ್ಲೂ ಒಬ್ಬ ಮಗ ಜನಿಸುತ್ತಾನೆ, ಆತನೇ ಯುಯುತ್ಸು (ನೂರೊಂದನೆಯ ಮಗ). ಮುಂದೆ ಪಾಂಡು ಕಾನನದಲ್ಲಿ ಪತ್ನಿ ಮಾದ್ರಿಯನ್ನು ಕೂಡುವಾಗ ಮುನಿಯ ಶಾಪದಿಂದ ಮರಣಹೊಂದುತ್ತಾನೆ.

ಭೀಮನು ಒಮ್ಮೆ ಕೌರವರ ಚೇಷ್ಟೆಯಿಂದಾಗಿ ನೀರಲ್ಲಿ ಎಸೆಯಲ್ಪಡುತ್ತಾನೆ, ಆಗ ಸರ್ಪರಾಜನಾದ ವಾಸುಕಿಯ ಮಗಳು ಈತನ ಮೇಲೆ ಮೋಹಗೊಂಡು ಭೀಮನನ್ನು ವಿವಾಹವಾಗುತ್ತಾಳೆ. ಪಾಂಡವರು ಅಜ್ಞಾತವಾಸದಲ್ಲಿರುವಾಗ ಭೀಮನು ಒಮ್ಮೆ ಭಲೀಷ್ಟ ರಕ್ಕಸನಾದ ಹಿಡಿಂಬನನ್ನು ಸಂಶಿಸುತ್ತಾನೆ, ಆತನನ್ನು ಸಂಹಾರ ಮಾಡಿ, ಆತನ ಮಗಳಾದ ಹಿಡಿಂಬೆಯನ್ನು ವಿವಾಹವಾಗಿ ಭಲೀಷ್ಟನಾದ ಘಟೋತ್ಕಚನೆಂಬ ಮಗನ ಜನನಕ್ಕೆ ಕಾರಣನಾಗುತ್ತಾನೆ.

ಹೀಗೆ ಪಾಂಡವರು ಕೌರವರಿಂದ ಅನ್ಯಾಯಕ್ಕೊಳಗಾಗಿ ಕಾಡು ಮೇಡುಗಳಲ್ಲಿ ಅಜ್ಞಾತವಾಗಿ ಅಲೆಯುತ್ತಿರಲು ಒಮ್ಮೆ ಪಾಂಚಾಲ ದೇಶದ ರಾಜ ದ್ರುಪದನ ಮಗಳ ಸ್ವಯಂವರವನ್ನು ಹೊಕ್ಕುತ್ತಾರೆ. ದ್ರುಪದನಿಗೆ ಇಬ್ಬರು ಮಕ್ಕಳು, ದ್ರೌಪದಿ (ಮಗಳು) ಮತ್ತು ದೃಷ್ಟದ್ಯುಮ್ನ (ಮಗ). ಆ ಸ್ವಯಂವರದಲ್ಲಿ ಪಾಂಡವರು, ಮುಖ್ಯವಾಗಿ ಅರ್ಜುನನು ಮತ್ಸ್ಯ ಯಂತ್ರವನ್ನು ಬೇಧಿಸಿ ದ್ರೌಪದಿಯನ್ನು ಪಡೆಯುತ್ತಾನೆ. ನಂತರದಲ್ಲಿ ಕುಂತಿಯ ಮಾತಿನಿಂದಾಗಿ ದ್ರೌಪದಿಯನ್ನು ಪಾಂಡುಕುಮಾರರೈವರೂ ವಿವಾಹವಾಗುತ್ತಾರೆ. ದ್ರೌಪದಿಯು ಈ ಪಾಂಡವರಿಂದ ಶ್ರುತ ಸೋಮಕ, ಪ್ರತಿವಿಂದ್ಯ, ಶ್ರುತಕೀರ್ತಿ, ಶ್ರುತಸೇನ ಮತ್ತು ವಿಕ್ರಮ ಶತಾನಿಕ ಎಂಬ ಐವರು ಮಕ್ಕಳನ್ನು ಪಡೆಯುತ್ತಾಳೆ. ಮುಂದೆ ಈ ಐವರೂ ಅಶ್ವಥ್ಥಾಮನ ಪ್ರಮಾದದಿಂದಾಗಿ ಸಾವನ್ನಪ್ಪುತ್ತಾರೆ.



......ಮುಂದುವರಿಯುತ್ತದೆ

ಮೂಲ: ವ್ಯಾಸಭಾರತ (ಎನ್ಕೆ)

Tuesday, March 24, 2009

ಕೃಷ್ಣ ಪಕ್ಷದ ಕೊನೆಗೆ ಮರೆಯಾದವಳು

ನನ್ನವಳು ಬೆಳದಿಂಗಳು.
ಬಿದಿಗೆಯ ನಿಶೆಯಲ್ಲಿ ಹೊರಳುವಾಗ
ಕಿಟಕಿಯಿಂದಿಳಿದು ಬಳಿ ಸರಿದವಳು.
ಕೂಡುವಾಗ ತುಸು ನಾಚಿ, ಮೋಡದ ಸೆರಗೆಳೆದು,
ಸಣ್ಣಗೆ ಕಂಪಿಸುತ; ಹನಿ ಹನಿಯಾಗಿ ಕರಗಿ,
ಕೃಷ್ಣ ಪಕ್ಷದ ಕೊನೆಗೆ ಮರೆಯಾದವಳು.


ಕಾಮ 'ಅಗ್ನಿದೀಪನ'
ಒಮ್ಮೆ ಕರಗಿ ನೀರಾದ ಮೇಲೆ
ಮತ್ತೆ ಮಂಜಾಗುವ ಬಯಕೆ.
ಹೆದೆಯೇರಿಸಿ ಬರುವಳು ಚಂದ್ರಮಂಚಕೆ
ಆದರೀಗ ಕಂಗಳಲಿ ಹೊಳಪು; ವಿವಸ್ತ್ರಳಾಗುತ್ತ,
ದಿವ್ಯ ಪ್ರಭೆಯೊಳಗೆ ಎನ್ನ ಸೆಳೆಯುತ್ತ
ಶುಕ್ಲ ಪಕ್ಷದ ಕೊನೆಗೆ ಬರಿದಾಗುವಳು.


ತಾಡಿಸುತ್ತ, ಚುಂಬಿಸುತ್ತ ಮೂಡಿಸಿದ
ಬಿಂಬಗಳು ಮಧುರ ಮಿಲನದ ಕುರುಹುಗಳು.
ಅದೇ ಚಂದ್ರಕಲೆ ; ಸಂಭ್ರಮದಿ ಮಿಂದು ಬಂದಾಗ
ಮೂಡಿದ ನಕ್ಷತ್ರದಂತ ಮಂದಹಾಸ.

ನವಮಾಸದಂತ್ಯದಲಿ
ಅದೋ ಮೋಡಗಟ್ಟಿತು, ನಾದ ಮೊಳಗಿತು.
ವರುಣನ ಜನನಕೆ ಮಂಗಳಾರತಿ.
ಭೂದೇವಿಯೊಡಲ ಚಿಗುರು, ಹಸಿರೋ ಹಸಿರು !

Thursday, February 26, 2009

ಬಂಧ ಮುಕ್ತೆ



ಮತ್ತೆ ನಿನಗೆ ನಾ ತೊಂದರೆ ಕೊಡುವುದಿಲ್ಲ,
ಜೀವಿಸಿಕೊ ನಿನ್ನ ಜೀವನ.
ಹಾರ ಬಯಸಿದ್ದೆಯಲ್ಲ ದಿವ್ಯ ದಿಗಂತದೆಡೆಗೆ,
ರೆಕ್ಕೆ ಬಿಚ್ಚಿ ಹಾರು, ಮತ್ತೆ ಪಂಜರದಲ್ಲಿ
ಬಂಧಿಸುವ ಕಾಯ೯ ನಾನೆಂದೂ ಮಾಡುವುದಿಲ್ಲ.

ನಿನಗಿನ್ನು ನನ್ನ ನೋಡಿ ಹೆದರುವ ಅಗತ್ಯವಿಲ್ಲ.
ನೀನು ಬಂಧ ಮುಕ್ತೆ. ನನ್ನ ಎದೆಗೂಡಿನಿಂದ,
ನನ್ನ ನೆನಪುಗಳಿಂದ, ನನ್ನ ಕನಸುಗಳಿಂದ.
ಆ ದಿನಮಣಿಯ ಕಿರಣ ನೀ ಹಾರುವ ದಿಕ್ಕ
ಬೇಳಗುತಿಹುದು, ಹೊರಡು ಬೇಗ.

ನಿನ್ನ ಜೀವನ ನಂದಾ ದೀಪವಾಗಲೆಂದೇ
ನನ್ನೆದೆಯ ಉಸಿರ ಸುರಿಯುತಿಹೆ
ಹಣತೆಯಲ್ಲಿ, ಬಸಿದುಕೊ ಸಾಧ್ಯವಾದಷ್ಟು.
ಆದಷ್ಟು ಬೇಗ ಬರಿದಾಗಿಸು.
ಆಗಲೇ ನಾ ನಿನ್ನ ನೆನಪುಗಳಿಂದ ಮುಕ್ತ.

ಇದುವರೆಗಿನೆಲ್ಲ ಕನಸುಗಳ ಹೂಮಾಲೆಯಾಗಿಸಿ
ನಿನ್ನ ಪಾದದಡಿಯಿಡುವೆ, ನಿನ್ನ ಹಾರುವ
ಕಾಲುಗಳಿಗದೇ ಚೈತನ್ಯವಂತೆ, ಒಮ್ಮೆ ತುಳಿದು
ಹಾಗೆಯೇ ನೆಗೆದುಬಿಡು ನಭ ನೀಲಿಯೆಡೆಗೆ.

ಮತ್ತೆ ನನ್ನ ಕಣ್ಣ ನೋಡಬೇಡ, ಕಳೆದುಕೊಂಡಿದ್ದೇನೆ
ಅವುಗಳಲ್ಲಿ ಅಶ್ರುಧಾರೆ ಹರಿದೀತೆಂದು.
ಮತ್ತೆ ಮಿಡುಕಬೇಡ, ಕೈ ಚಾಚಬೇಡ, ಮಣ್ಣಲ್ಲಿ
ಮಣ್ಣಾಗಿ ಹೋಗುವ ಮುನ್ನ ಹಾರಿಬಿಡು,
ಪ್ರಾಣ ಪಕ್ಷಿ ಹಾರಿ ಹೋದಂತೆ.

ಮತ್ತೆ ನಾ ನಿನಗೆ ತೊಂದರೆ ಕೊಡುವುದಿಲ್ಲ.

Thursday, February 19, 2009

ಮತ್ತೆ ನಿನ್ನೆಡೆಗೆ ತುಡಿಯುತ್ತಿದೆ ಮನ

ಇಷ್ಟು ದಿನ ನಿನ್ನ ಮೇಲಿನ ಅನುಕಂಪಕ್ಕೋಸ್ಕರ ನಿನ್ನ ಪ್ರೀತಿಯನ್ನ ಒಪ್ಪಿಕೊಂಡಿದ್ದೆ ಅನ್ನಿಸುತ್ತಿತ್ತು, ಆದರೆ ಮೊದಲ ಬಾರಿಗೆ ನನ್ನ ಎದೆಯಲ್ಲಿ ಮೋಡಗಟ್ಟಿ ಪ್ರೀತಿ ಮಳೆಹನಿಯಾಗಿ ಉದುರಿದ್ದು ಇಂದು. ನನ್ನಲ್ಲಿ ಉಂಟಾದ ಬದಲಾವಣೆಗೆ ನನಗೆ ಆಶ್ಚಯ೯ವಾಗುತ್ತಿದೆ. ಯಾವತ್ತೂ ಇಲ್ಲದ ದುಗುಡ, ಆತಂಕ, ವಿವ್ಹಲತೆ ಇವೆಲ್ಲಾ ಶುರು ಆದದ್ದು ಆ ಒಂದು ಮಾತಿನಿಂದ. ನನ್ನ ಪ್ರೀತಿಸಿದವಳ, ನನ್ನ ಆರಾಧಿಸಿದವಳ, ನನಗೋಸ್ಕರ ತಪಸ್ಸನ್ನೆ ಆಚರಿಸಿದವಳ ಮದುವೆಯಂತೆ ಎಂಬ ಸುದ್ದಿಯನ್ನು ಕೇಳಿದಾಗ ನನ್ನೆದೆ ಡವಗುಟ್ಟತೊಡಗಿತು. ಮುಖದಲ್ಲಿ ದುಗುಡ ತುಂಬಿದ ಭಯ, ನಿಂತ ಜಾಗದಲ್ಲಿಯೆ ಧರೆಯಲ್ಲಿ ಕುಸಿಯುತ್ತಿದ್ದೆನೇನೋ ಎಂಬ ಭ್ರಮೆ. ನನಗೆ ವಿಸ್ಮಯ; ಆ ಒಂದು ಮಾತಿನಿಂದ ನನ್ನಲ್ಲಿ ಈ ರೀತಿಯ ಬದಲಾವಣೆಗಳು ಏಕಾದವು ಎಂದು. ನನ್ನಲ್ಲಿಯೇ ಹಲವಾರು ಬಾರಿ ಪ್ರಶ್ನಿಸಿಕೊಂಡೆ, ಆಗಲೇ ಅನ್ನಿಸಿದ್ದು ಇದೇನಾ ಪ್ರೀತಿ ಎಂದು.

ನಿನ್ನ ಜಿದ್ದಿಗೆ ಬಾಗಿ ನಿನ್ನನ್ನ ನನ್ನ ಪ್ರೇಯಸಿ, ನೀನೆ ನನ್ನ ಜೀವನದ ಸಂಗಾತಿ ಎಂದು ಒಪ್ಪಿಕೊಂಡಿದ್ದೆ. ಆದರೆ ಆ ಸಂಬಂಧದಲ್ಲಿ ಪ್ರೀತಿ ಕೇವಲ ಒಪ್ಪಂದವಾಗಿತ್ತಷ್ಟೆ. ಒಪ್ಪಂದದ ಅಡಿಪಾಯದ ಮೇಲೆ ಕಟ್ಟಿದ ಸೌಧ ಎಷ್ಟು ದಿನ ತಾನೇ ಉಳಿದೀತು? ನೊಡ ನೋಡುತ್ತಿದ್ದಂತೆಯೇ ಉರುಳಿ ಬಿದ್ದಿತ್ತು. ಆಶ್ಚಯ೯ವೆಂದರೆ ಇಷ್ಟೊಂದು ಗಾಢವಾಗಿ ಪ್ರೀತಿಸಿದವಳ ಎದೆಯಲ್ಲಿ ದ್ವೇಷದ ಕಿಡಿ ಮೂಡಿದ್ದಾದರೂ ಹೇಗೆ ಎಂಬುದು. ಇಬ್ಬರೂ ಬೇರೆಯಾದೆವು. ಬೇರೆಯಾದುದನ್ನು ಸಮಥಿ೯ಸಿಕೊಳ್ಳುವುದಕ್ಕೆ ಇಬ್ಬರಲ್ಲಿಯೂ ಯಾವುದೇ ಕಾರಣಗಳಿರಲಿಲ್ಲ. ಅದು ನಿಮಿತ್ತ ಮಾತ್ರ. ಇದ್ದರೇ ಅದರಲ್ಲಿ ಇಬ್ಬರದೂ ತಪ್ಪಿದೆ. ಅನುಮಾನದ ಸುಳಿ ನಮ್ಮಿಬ್ಬರನ್ನೂ ನುಂಗಿಹಾಕಿತ್ತು. ಕಾರಣಗಳನ್ನ ಹುಡುಕಿ ಅದನ್ನ ಪರಿಹರಿಸುವ ವ್ಯವಧಾನ ಇಬ್ಬರಲ್ಲಿಯೂ ಇರಲಿಲ್ಲ. ಕಾರಣ, ಇಬ್ಬರ ಮನಸ್ಸಿನಲ್ಲಿಯೂ ಎಲ್ಲೋ ಒಂದು ಕಡೆ ಈ ಸಂಬಂಧ ಮುರಿದು ಹೋಗಲಿ ಎಂಬ ಭಾವನೆ ಮೂಡಿದಂತಿತ್ತು. ಅದಕ್ಕೇನೆ ಬೇರೆ ಬೇರೆಯಾದರೂ ಅದನ್ನ ಮತ್ತೆ ಕೆದಕಿ ತೆಗೆದು ನೋಡುವ ಗೋಜಿಗೆ ಹೋಗಲಿಲ್ಲ. ಈ ಕಥೆ ಇಲ್ಲಿಗೇ ಮುಗಿದು ಬಿಡಲಿ ಎಂಬ ನಿಧಾ೯ರ ತೆಗೆದುಕೊಂಡವರಂತೆ ನಡೆದುಬಿಟ್ಟೆವು.

ಹೀಗೆ ಸಂಬಂಧ (ಒಪ್ಪಂದ) ಮುರಿದು ಬಿದ್ದಿದ್ದಕ್ಕೆ ನನಗೆ ಯವುದೇ ರೀತಿಯ ದು:ಖ ಅಥವಾ ನೋವು ಆಗಿರಲಿಲ್ಲ. ಆದರೆ ಇಂದು ನಿನ್ನ ಮದುವೆಯ ಮಾತು ಕಿವಿಗೆ ಬೇಳುತ್ತಿದ್ದಂತೆ ನಾನು ಅಧಿರನಾದದ್ದು ಏಕೆ? ಬಹುಷಹ ನಿನ್ನ ಮೇಲೆ ಪ್ರೀತಿ ಇಲ್ಲ ಎಂದು ಸಾರಿ ಹೇಳುವಾಗ ನನ್ನಂತರಂಗದಲ್ಲ್ಎಲ್ಲೋ ಒಂದು ಕಡೆ ನಿನ್ನೆಡೆ ಪ್ರೀತಿಯ ಚಿಗುರು ಮೂಡುತ್ತಿದ್ದಿರಬೇಕು. ನಾನು ಬೇಡವೆಂದರೂ ನನ್ನೊಳ ಮನಸ್ಸು ಕಿಟಕಿಯ ಬಾಗಿಲನ್ನು ತೆರೆದು ತನ್ನ ಇರುವಿಕೆಯನ್ನ ತೋರಿಸಲು ಪ್ರಯತ್ನಿಸುತ್ತಿರಬೇಕು. ಇದೇನಾ ಪ್ರೀತಿ? ಹೌದು ಇದೇ ಪ್ರೀತಿ. ಮತ್ತೆ ನಿನ್ನೆಡೆಗೆ ನನ್ನ ಮನ ತುಡಿಯುತ್ತಿದೆ. ಆದರೇನಂತೆ ಎಲ್ಲಕ್ಕೂ ಪೂಣ೯ವಿರಾಮವಿಟ್ಟಂತಿರುವ ನಿನ್ನ ನಿಧಾ೯ರ ನನ್ನನ್ನು ತಡೆದು ನಿಲ್ಲಿಸಿದೆ. ನಾಳೆಯ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ಇವತ್ತಿನದಂತೂ ಸತ್ಯ. ನಾನು ನಿನ್ನನ್ನ ಪ್ರೀತಿಸುತ್ತಿದ್ದೇನೆ. ಅಂದು ನಿನ್ನ ಪ್ರೀತಿಯ ಚಿಗುರಿಗೆ ನಾನು ಅನುಕಂಪದ ನೀರೆರೆದಂತೆ ಇಂದು ಮೂಡುತ್ತಿರುವ ನನ್ನ ಪ್ರೀತಿಯ ಆಸೆಗೆ ಅನುಕಂಪದಿಂದಲಾದರೂ ಸರಿಯೆ ಬೊಗಸೆಯಲೊಂದಿಷ್ಟು ನೀರುಣಿಸುವೆಯಾ? ಬದುಕಿಕೊಳ್ಳುವುದೀ ಬಡಜೀವ.

Friday, January 9, 2009

ಕಣ್ಣ ಹನಿಯ ಕರೆದು ಕೇಳು

ನೊಂದ ಮನವು ನುಡಿವ ಸಾಲು,
ತೊರೆದ ಗೆಳತಿಯ ಪ್ರೀತಿ ಪಾಲು.
ಕಣ್ಣ ಹನಿಯ ಕರೆದು ಕೇಳು,
ಎದೆಯೊಳೆಷ್ಟು ತೀರದ ನೋವು.


ನೇನಪು ಸರಿದು, ಮತ್ತೆ ಬರಲು
ಬಿಕ್ಕುತಿಹುದು ಒಂಟಿ ಮನಸು.
ಕಡಲ ತಡಿಯ ಹೆಜ್ಜೆ ಗುರುತು,
ತಿರುಗಿ ನೋಡೆ ಇಲ್ಲ ಕುರುಹು.


ಮಾತು, ಮಾತು ಬೆರೆತ ಹೊತ್ತು
ಈಗ ಮೌನವೇ ನಿತ್ಯ ತುತ್ತು.
ರಾಗ, ಭಾವದ ಕಾವ್ಯ ಸಂಜೆಗೆ
ರಕ್ತ ಚೆಲ್ಲಿದ ಅಸ್ಥ ದಿಕ್ಕು.


ನಿನಗೆ ತರವೆ, ಓ ಒಲವೆ,
ಪ್ರೇಮದುಸಿರ ಕಡಿವ ಬಯಕೆ
ಬದುಕ ಬಯಸಿ "ಅಂಜಲಿ" ಪಿಡಿವೆ,
ಜನಿತ ತಮವನೊರೆಸಿ ಪೊರೆಯೆ.

ನಿನ್ನ ಪ್ರೀತಿಗೆ !

"ನಿನ್ನ ಮದುವೆ ಆಗೋ ಹೆಣ್ಣು ತುಂಬಾ ಪುಣ್ಯ ಮಾಡಿರಬೇಕು ಕಣೋ; ಆದರೆ ಆ ಪುಣ್ಯ ನನಗಿಲ್ದೇ ಹೋಯ್ತಲ್ಲ", ಎಂದು ಕಣ್ತುಂಬಿಕೊಂಡು ಆಡಿದ ಮಾತುಗಳು ಇಂದಿಗೂ ನನ್ನ ಎದೆಯಲ್ಲಿ ಅಚ್ಚಾಗಿ ಉಳಿದಿದೆ. "ಯಾಕೆ ನನ್ನ ಅಷ್ಟೊಂದು ಹಚ್ಚಿಕೊಂಡೆ ಹುಡುಗಿ?". ಅಂದು ಜ್ಯೂನಿಯರ್ ವೆಲ್ ಕಮ್ ಪಾಟಿ೯ಯಲ್ಲಿ ನಿಮ್ಮನ್ನ ಸ್ವಾಗತ ಮಾಡುವಾಗ ನಾನು ನಿನಗೆ ನೀಡಿದ ಒಂದೇ ಒಂದು ಗುಲಾಬಿ ಹೂವು, ನನ್ನ ಸಹಾಯಕ್ಕೆ ಬಂದಾಗಲೆಲ್ಲ ಕೇವಲ ತಮಾಷೆಗಾಗಿ "ನನ್ನ ಮೇಲೆ ಅಷ್ಟೊಂದು ಪ್ರೀತಿಯೇನೆ ಹುಡುಗಿ", ಅಂದ ನನ್ನ ಮಾತುಗಳೇ ನೀನು ನನ್ನ ಪ್ರೀತಿಸುವುದಕ್ಕೆ ಮಣೆ ಹಾಕಬಹುದು ಎಂದು ನಾನು ಕನಸಿನಲ್ಲೂ ಎಣಿಸಿರಲಿಲ್ಲ. ನನ್ನ ಕೈ ನಿಮ್ಮೆಡೆಗೆ ಚಾಚಿದ್ದು ಒಂದು ಮಧುರ ಸ್ನೇಹಕ್ಕಾಗಿ, ಆದರೆ ಅದನ್ನ ಪ್ರೀತಿಗಾಗಿ ಅಂದುಕೊಂಡೆಯಲ್ಲೇ ಹುಡುಗಿ. ನಿನ್ನ ಪ್ರೀತಿಗೆ ಅಹ೯ನಾದ ವ್ಯಕ್ತಿ ನಾನಲ್ಲ ಕಣೆ ಎಂದು ಕೂಗಿ ಹೇಳುವಷ್ಟರಲ್ಲಿಯೇ ನಿನ್ನ ಮೈ ಮನಸ್ಸುಗಳಲ್ಲಿ ನನ್ನನ್ನು ತುಂಬಿಕೊಂಡಿದ್ದೆ. "ಇಲ್ಲ" ಎನ್ನುವ ಪದ ನಿನ್ನ ಕಿವಿಗೆ ಬೀಳದಂತೆ ಆ ದೇವರಲ್ಲಿ ಪ್ರಾಥಿ೯ಸಿಕೊಳ್ಳುತ್ತಿದ್ದೆ. ನನ್ನ ನೆರಳಾಗಿ ನನ್ನ ಸಾಮೀಪ್ಯಕ್ಕಾಗಿ ಹಾತೊರೆಯುತ್ತಿದ್ದೆ. ನನ್ನ ಒಂದು ಮಾತಿಗಾಗಿ ಎಷ್ಟೋ ವಷ೯ದಿಂದ ಮಳೆಹನಿಯನ್ನೇ ಕಾಣದ ಬಿಸಿ ಭೂಮಿಯ ಹಾಗೆ ಕಾದು ಕುಳಿತಿದ್ದೆ. ಆದರೆ ಹುಡುಗಿ ನಿನ್ನನ್ನ ಒಬ್ಬ ಆತ್ಮೀಯ ಗೆಳತಿಯನ್ನಾಗಿ ಸ್ವೀಕರಿಸಿದ್ದೆನೆ ಹೊರತು ಬೇರೆ ಯಾವುದೇ ರೀತಿಯ ಅನುರಾಗ ಇರಲಿಲ್ಲ. ಇದನ್ನ ನಿನಗೆ ಹೇಳುವುದಾದರೂ ಹೇಗೆ ? ಅಷ್ಟೊಂದು ಪ್ರೀತಿಯನ್ನ ತುಂಬಿಕೊಂಡಿರುವ ನೀನು ಎಲ್ಲಿ ಸಿಡಿದು ಹೋಗುವೆಯೋ ಅನ್ನೊ ಭಯ. ಆದರೆ ಹೇಳದೇ ವಿಧಿಯಿರಲಿಲ್ಲ, ಅದಕ್ಕೆ ಸೂಕ್ಷ್ಮವಾಗಿ " ನಾನು ನಿನ್ನನ್ನ ಒಬ್ಬ ಆತ್ಮೀಯ ಗೆಳತಿಯನ್ನಾಗಿ ಸ್ವೀಕರಿಸಬಲ್ಲೆನೆ ಹೊರತಾಗಿ ಪ್ರೇಮಿಯನ್ನಾಗಿ ಅಲ್ಲ" ಎಂದು ಚಿಕ್ಕದಾಗಿ ಬರೆದು ನಿನ್ನ ಅಂಗೈಯ್ಯಲ್ಲಿಟ್ಟು ಎದುರು ಮೂಕನಾಗಿ ನಿಂತೆ. ಅದನ್ನು ಓದಿದ ನೀನು ನೀನಾಗಿರಲಿಲ್ಲ, ಒಮ್ಮೆಲೇ ಧರೆಗೆ ಕುಸಿದು ಹೋದೆ. ಅಷ್ಟೇ, ನಿನ್ನ ಕಣ್ಣಿನಿಂದ ತೊಟ್ಟಿಕ್ಕುತ್ತಿದ್ದ ಹನಿಗಳೇ ಸಾರುತ್ತಿದ್ದವು ನನ್ನ ಮೇಲಿನ ಪ್ರೀತಿಯನ್ನ. ಆಗ ಅದುರುತ್ತಿದ್ದ ನಿನ್ನ ತುಟಿಯಿಂದ ಬಂದ ಮಾತು ಇಷ್ಟೇ, "ನಿನ್ನ ಮದುವೆ ಆಗೋ ಹೆಣ್ಣು ತುಂಬಾ ಪುಣ್ಯ ಮಾಡಿರಬೇಕು ಕಣೋ; ಆದರೆ ಆ ಪುಣ್ಯ ನನಗಿಲ್ದೇ ಹೋಯ್ತಲ್ಲ". ಆಂದು ನಿನ್ನನ್ನು ಸಮಾಧಾನಿಸಲು ನನ್ನಲ್ಲಿ ಮಾತುಗಳಿರಲಿಲ್ಲ, ಮಂಕಾಗಿ ನಿಂತು ನಿನ್ನ ಕಣ್ಣಿನಿಂದ ತೊಟ್ಟಿಕ್ಕುತ್ತಿದ್ದ ಹನಿಗಳಲ್ಲಿ ನನ್ನ ಮೆಲಿನ ಪ್ರೀತಿಯನ್ನ ನೋಡುತ್ತಿದ್ದೆ. ಮುಂಜಾನೆಯ ಮಂಜು ಎಲೆಯ ಮೇಲೆ ಬಿದ್ದು ಜಾರಿ ಹೋಗುವ ಹಾಗೆ ನನ್ನ ಬದುಕಿಂದ ಜಾರಿ ಹೋದೆ. ಇಂದು ನಿನ್ನ ನೆನಪಾದಾಗಲೆಲ್ಲ ನನ್ನ ಕಣ್ಣ ಮುಂದೆ ಸುಳಿಯುವ ಕವಿಯ ಸಾಲು, "ನಿನ್ನ ಪ್ರೀತಿಗೆ ಅದರ ರೀತಿಗೆ ನೀಡಬಲ್ಲೆನೆ ಕಾಣಿಕೆ...".
ನನ್ನ ಕ್ಷಮಿಸು ಗೆಳತಿ